ಓರೊಬ್ಯಾಂಕೇಸಿ: ದ್ವಿದಳ ಸಸ್ಯಗಳ ವರ್ಗದ ಟ್ಯೂಬಿಫ್ಲೋರಿ ಗಣಕ್ಕೆ ಸೇರಿದ ಒಂದು ಕುಟುಂಬ. ಸು. 14 ಜಾತಿ, 180 ಪ್ರಬೇಧಗಳು ಇವೆ. ಸಾಮಾನ್ಯವಾಗಿ ಉತ್ತರ ಸಮಶೀತೋಷ್ಣವಲಯಕ್ಕೆ ಬಹುಪಾಲು ಸೀಮಿತಗೊಂಡಿರುವ ಇವುಗಳ ಕೆಲವು ಜಾತಿಗಳು ಯುರೋಪು ಹಾಗೂ ಏಷ್ಯಾಗಳ ಕೆಲವು ಪ್ರದೇಶಗಳಲ್ಲೂ ಬೆಳೆಯುತ್ತವೆ. ಈ ಕುಟುಂಬದಲ್ಲಿ ಬರುವ ಸಸ್ಯಗಳಲ್ಲಿ ಸಾಮಾನ್ಯವಾಗಿ ಪತ್ರಹರಿತ್ತು ಇರುವುದಿಲ್ಲ. ಇದ್ದರೂ ಅತ್ಯಲ್ಪ ಪ್ರಮಾಣದಲ್ಲಿ ಇರುತ್ತದೆ. ಆದ್ದರಿಂದ ಈ ಸಸ್ಯಗಳು ಬೇರೆ ಸಸ್ಯಗಳ ಬೇರುಗಳ ಮೇಲೆ ಪರಾವಲಂಬಿಗಳಾಗಿ ಮೂಲಿಕೆಗಳ ರೂಪದಲ್ಲಿ ವಾರ್ಷಿಕ ಮತ್ತು ಬಹುವಾರ್ಷಿಕಗಳಾಗಿ ಬೆಳೆಯುತ್ತವೆ. ಎಲೆಗಳು ಹುರುಪೆ ಎಲೆಗಳ ರೂಪದಲ್ಲಿರುತ್ತವೆ. ಹೂಗಳು ಗೊಂಚಲುಗಳಲ್ಲಿರಬಹುದು ಅಥವಾ ಏಕಪುಷ್ಪಗಳಾಗಿರಬಹುದು. ಏಕಪುಷ್ಪವಾದರೆ ಸಸ್ಯದ ತುದಿಯಲ್ಲಿ ಬಿಡುತ್ತದೆ (ಫೆಲಿಪಿಯ), ಹೂಗೊಂಚಲಾದರೆ ಸಸ್ಯದ ತುದಿಯಲ್ಲಿ ಅಥವಾ ಎಲೆಯ ಕಂಕುಳಲ್ಲಿದ್ದು ರೆಸೀಮ್ ಅಥವಾ ಕದಿರುಗೊಂಚಲು (ಸ್ಪೈಕ್) ಮಾದರಿಯದ್ದಾಗಿರುತ್ತದೆ. ಹೂಗಳು ದ್ವಿಲಿಂಗ ಮತ್ತು ಉಭಯಪಾಶರ್ವ್‌ ಸಮಾಂಗತೆ ಉಳ್ಳವು.
 
ಪ್ರತಿ ಹೂ ಒಂದು ಬ್ರಾಕ್ಟ್‌ ಮತ್ತು ಸಾಮಾನ್ಯವಾಗಿ ಎರಡು ಬ್ರ್ಯಾಕ್ಟಿಯೋಲುಗಳನ್ನು ಹೊಂದಿರುತ್ತದೆ. ಹೂವಿನ ಪುಷ್ಪಪತ್ರ ಭಾಗ ವಿವಿಧ ರೀತಿಯಲ್ಲಿದ್ದು ಈ ಗುಣ ಕುಟುಂಬದಲ್ಲಿ ಬರುವ ಸಸ್ಯಗಳ ವರ್ಗೀಕರಣದಲ್ಲಿ ಬಲು ಸಹಾಯವನ್ನು ಮಾಡುತ್ತದೆ. ಸಾಮಾನ್ಯವಾಗಿ ಒಂದು ಹೂವಿನಲ್ಲಿ ಐದು ಪುಷ್ಪ ಪತ್ರಗಳಿರಬೇಕು. ಕೆಲವು ಪ್ರಬೇಧಗಳು ಅಕ್ಕಪಕ್ಕದಲ್ಲಿ ಅಥವಾ ಮುಂಭಾಗದಲ್ಲಿ ಬರುವ ಪುಷ್ಪಪತ್ರಗಳು ಇರುವುದಿಲ್ಲ. ಪುಷ್ಪದಳಗಳು ಐದು; ಎರಡು ತುಟಿಗಳಾಗುವಂತೆ ಕೂಡಿಕೊಂಡಿರುತ್ತವೆ. ಕೇಸರಗಳು ನಾಲ್ಕು. ಕೆಲವೊಮ್ಮೆ ಐದನೆಯದೂ ಇರುವುದುಂಟು. ಆದರೆ ಅದು ಬರಡಾಗುತ್ತದೆ (ಸ್ಟ್ಯಾಮಿನೋಡ್) ಪರಾಗಕೋಶಗಳು ಉದ್ದಕ್ಕೂ ಬಿರುಕು ಬಿಟ್ಟುಕೊಳ್ಳುತ್ತವೆ. ಕ್ರಿಸ್ಟಿಸೋನಿಯಾ ಜಾತಿಯಲ್ಲಿ ಒಂದು ಕೇಸರದಲ್ಲಿ ಅರ್ಧ ಭಾಗ ಮಾತ್ರವಿರುತ್ತದೆ. ಅಂಡಾಶಯ ಉಚ್ಚಸ್ಥಾನದ್ದಾಗಿದ್ದು ಸಾಮಾನ್ಯವಾಗಿ ಎರಡು ಕಾರ್ಪೆಲುಗಳಿಂದ ಕೂಡಿರುತ್ತದೆ. ಪ್ರತಿ ಕಾರ್ಪೆಲಿನಲ್ಲೂ ಅಧಿಕ ಸಂಖ್ಯೆಯಲ್ಲಿರುವ ಅಂಡಕಗಳು ಅಂಡಾಶಯದ ಒಳಭಿತ್ತಿಗೆ ಅಂಟಿಕೊಂಡಿರುತ್ತವೆ. ಫಲ ಸಂಪುಟ (ಕ್ಯಾಪ್ಸುಲ್) ಮಾದರಿಯದು. ಬೀಜಗಳು ತುಂಬ ಚಿಕ್ಕವು. ಅವುಗಳ ಪ್ರಸಾರ ಗಾಳಿಯ (ಕ್ಯಾಪ್ಸುಲ್) ಮಾದರಿಯದು. ಬೀಜಗಳು ತುಂಬ ಚಿಕ್ಕವು. ಅವುಗಳ ಪ್ರಸಾರ ಗಾಳಿಯ ಮುಖಾಂತರ. ಈ ಕುಟುಂಬದ ಪ್ರಬೇಧಗಳು ಕೆಲವೇ ನಿರ್ದಿಷ್ಟ ಆಶ್ರಯ ಸಸ್ಯಗಳ ಮೇಲೆ ಬೆಳೆಯುತ್ತವೆ. ಉದಾಹರಣೆಗಾಗಿ ಓ ಹೆಡರಿಯೇಯು ಐವಿ ಗಿಡದ ಮೇಲೂ ಓ.ಮೈನರ್ ಎಂಬುದು ಕ್ಲೋವರ್ ಗಿಡದ ಮೇಲೂ ಬೆಳೆಯುತ್ತವೆ.

ಓ. ಈಜಿಪ್ಟಿಯಾಕ ಮತ್ತು ಓ.ಸೆರ್ನುವ ಸಾಧಾರಣವಾಗಿ ಭಾರತದಲ್ಲಿ ಬೆಳೆಯುತ್ತವೆ. ದನಗಳ ಗಂಟಲಿನ ಹುಣ್ಣುಗಳನ್ನು ಹಾಗೂ ಡಯೇರಿಯ ರೋಗವನ್ನು ನಿಲ್ಲಿಸಲು ಓ. ಈಜಿಪ್ಟಿಯಾಕ ಗಿಡವನ್ನು ಔಷಧಿಯಾಗಿ ಉಪಯೋಗಿಸುತ್ತಾರೆ. ಕೆಲವು ಜಾತಿ ಹಾಗೂ ಪ್ರಬೇಧಗಳು ಉಪಯುಕ್ತ ಸಸ್ಯಗಳ ಮೇಲೆ ಬೆಳೆದು ತುಂಬ ದುಷ್ಪರಿಣಾಮವನ್ನುಂಟು ಮಾಡುತ್ತವೆ. ಸಾಮಾನ್ಯವಾಗಿ ಸಾಸಿವೆ ಜಾತಿಯ ಗಿಡಗಳು ಭಂಗಿ, ಬದನೆ, ಹೊಗೆಸೊಪ್ಪು, ಗಸಗಸೆ, ಮುಸುಕಿನ ಜೋಳ, ಕುಸುಬೆ ಗಿಡಗಳ ಮೇಲೆ ಪರಾವಲಂಬಿಗಳಾಗಿ ಬೆಳೆದು ಬೆಳೆಯನ್ನು ಹಾಳುಮಾಡುತ್ತವೆ.	(ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ